ಸೂಪರ್ನೋವಾ
	ಬೃಹದ್ಗಾತ್ರದ ನಕ್ಷತ್ರಗಳ ಅವಸಾನ ಹಂತದಲ್ಲಿ ಹಠಾತ್ತನೆ ಘಟಿಸುವ ಮಹಾಸ್ಫೋಟ. ನೋವಾ ಎಂದರೆ ನವನಕ್ಷತ್ರ ಎಂದು ಅರ್ಥ. ಆಕಾಶದಲ್ಲಿ ಹೊಸತೊಂದು ನಕ್ಷತ್ರ ಕಾಣಿಸಿಕೊಂಡಾಗ ಈ ಬಗೆಯ ಹೆಸರು ಕೊಡುತ್ತಿದ್ದುದು ವಾಡಿಕೆ (17ನೆಯ ಶತಮಾನ). ಈಗ ನಾವು ತಿಳಿದುಕೊಂಡಿರುವ ಪ್ರಕಾರ ನಕ್ಷತ್ರದ ಅವಸಾನದ ಈ ಸ್ಫೋಟದಲ್ಲಿ ಅತಿ ಹೆಚ್ಚು ಶಕ್ತಿ ವಿಮೋಚನೆಗೊಳ್ಳುವುದರಿಂದ ತಾತ್ಕಾಲಿಕವಾಗಿ ಅದು ಅತ್ಯುಜ್ಜ್ವಲವಾಗಿ ಬೆಳಗುತ್ತದೆ. ಇದಕ್ಕೆ ಮುಂಚೆ ಅದು ಬರಿಗಣ್ಣಿಗೆ ಗೋಚರಿಸದಷ್ಟು ಕ್ಷೀಣವಾಗಿರುತ್ತದೆ. ಎಂದೇ ಈ ಬಗೆಯ ಸ್ಫೋಟಕ್ಕೆ ಸೂಪರ್ನೋವಾ (ಮಹಾನೋವಾ) ಎಂದು ಹೆಸರು.

	ಬಲ-ಮೇಲೆ: ಆದಿಮ ನಕ್ಷತ್ರ ನೀಹಾರಿಕೆಯ ಒಡಲಿನಲ್ಲಿ ಮೈದಳೆಯುತ್ತದೆ. ಅಲ್ಲಿಂದ ವಿಕಸಿಸುತ್ತ ಸೂಪರ್ನೋವಾ ಸ್ಫೋಟನೆಗೆ ಬಲಿ ಆಗುತ್ತದೆ: ಬಿಳಿಗೊಂಡೆ ಇದನ್ನು ಪ್ರತೀಕಿಸುತ್ತದೆ. ಆಸ್ಫೋಟನಾ ನಂತರ ನಕ್ಷತ್ರಗಾತ್ರ ಕುಗ್ಗುತ್ತ ಹೋಗಿ ಮುಂದೆ ಕೃಷ್ಣವಿವರವಾಗಿ ಕಣ್ಮರೆಯಾಗುತ್ತದೆ (ಬಲಕೊನೆ)

	ನಮ್ಮ ಬ್ರಹ್ಮಾಂಡವಾದ ಆಕಾಶಗಂಗೆಯಲ್ಲಿ ಪ್ರತಿ 50-60 ವರ್ಷಗಳಿಗೆ ಒಂದು ಸೂಪರ್ನೋವಾ ಉಂಟಾಗಬಹುದೆಂದು ಗಣಿಸಲಾಗಿದ್ದರೂ 1604ರ ಬಳಿಕ ಪ್ರಕಟವಾದದ್ದು 1987ರ ಸೂಪರ್ನೋವಾ ಮಾತ್ರ. ಇದರ ಅರ್ಥ ಸೂಪರ್ನೋವಾಗಳು ವಿರಳ ಘಟನೆಗಳೆಂದಲ್ಲ, ದೇಶ-ಕಾಲಗಳಲ್ಲಿ ವಿಶ್ವ ಅಷ್ಟು ಅಗಾಧ ಮತ್ತು ನಮ್ಮ ನೆಲೆ ಮತ್ತು ಅರಿವು ಅಷ್ಟು ಅಲ್ಪ ಎಂದು!

	ನಕ್ಷತ್ರಸ್ಫೋಟ ಉಂಟಾಗಲು ಇದ್ದಕ್ಕಿದ್ದಂತೆ ಬೈಜಿಕಕ್ರಿಯೆಯ ಹೆಚ್ಚಳ ಕಾರಣವಾಗಬಹುದು ಅಥವಾ ಗುರುತ್ವಬಲದ ಕಾರಣ ಅಗಾಧ ಕುಸಿತವೂ (ನಿಪತನ-ಕೊಲ್ಲಾಪ್ಸ್) 
ಕಾರಣವಾಗಬಹುದು. ಬೃಹದ್ಗಾತ್ರದ ನಕ್ಷತ್ರಗಳ ಅವಸಾನದಲ್ಲಿ ಅಗಾಧ ಗುರುತ್ವನಿಪತನ ಉಂಟಾಗಿ ನಕ್ಷತ್ರ ಸಿಡಿದು ಹೋಗುತ್ತದೆ. ಇದಕ್ಕೆ ಎರಡನೆಯ ವರ್ಗದ್ದು (ಟೈಪ್ II) ಎಂದು ಹೆಸರು. ಇದೇ ಸೂಪರ್ನೋವಾ. ಹೀಗಲ್ಲದೇ ಯಮಳನಕ್ಷತ್ರಗಳ ಪೈಕಿ ಒಂದು ಶ್ವೇತಕುಬ್ಜವಾಗಿದ್ದು ಇನ್ನೊಂದು ಸಾಧಾರಣ ನಕ್ಷತ್ರವಾಗಿರಬಹುದು. ಶ್ವೇತಕುಬ್ಜದ ಮೇಲೆ ಸಂಗಾತಿಯಿಂದ ವಸ್ತುಸಂಗ್ರಹವಾಗಿ ತಟ್ಟೆಯಂತೆ ಹರಡಿಕೊಳ್ಳುತ್ತದೆ (ಸಂಚಯನ ಬಿಲ್ಲೆ). ಈ ಬಿಲ್ಲೆಯ ಕಾರಣ ಶ್ವೇತಕುಬ್ಜದಲ್ಲಿ ಅಸ್ಥಿರತೆ ಉಂಟಾಗಿ ಇದು ಸ್ಫೋಟಿಸುವುದು. ಇದು ಮೊದಲನೆಯ ವರ್ಗದ್ದು (ಟೈಪ್ I). ಇದೇ ನೋವಾ.

	ಸಾಧಾರಣವಾಗಿ ಸೂಪರ್ನೋವಾಗಳನ್ನು ಟೈಪ್ II ಎಂದೇ ಗುರುತಿಸಲಾಗುವುದು. ಬೃಹತ್ ದ್ರವ್ಯರಾಶಿಯ ಆದಿಮ ನಕ್ಷತ್ರಗಳಲ್ಲಿ ಬೈಜಿಕ ಕ್ರಿಯೆಗಳಿಗೆ ಇಂಧನ ಹೈಡ್ರೊಜನ್. ಈ ನಕ್ಷತ್ರಕ್ಕೆ ಹೈಡ್ರೊಜನ್ ತಾರೆ ಎಂದು ಹೆಸರು.  ಮುಂದೆ ಅದು ಅನುಕ್ರಮವಾಗಿ ಹೀಲಿಯಮ್ ತಾರೆ (ರಕ್ತ ದೈತ್ಯ) ಮತ್ತು ಕಾರ್ಬನ್ ಹಂತಗಳನ್ನೈದುತ್ತದೆ. ಈ ಮೂರನೆಯ ಹಂತದಲ್ಲಿ ಅದರ (ಕಾರ್ಬನ್ ನಕ್ಷತ್ರ) ರಾಶಿ ಚಂದ್ರಶೇಖರ್ ಪರಿಮಿತಿಗಿಂತ (= 1.4xಸೌರರಾಶಿ) ಕಡಿಮೆ ಇದ್ದರೆ ಅದು ಶ್ವೇತಕುಬ್ಜವಾಗಿ (ನೋಡಿ) ಕ್ರಮೇಣ ನಂದಿ ಮಡಿಯುತ್ತದೆ (ವಿಕಿರಣ ಬೀರದು), ಇಲ್ಲವೇ ನವಜಾತ ನಕ್ಷತ್ರವೊಂದಕ್ಕೆ ಗುರುತ್ವಾತ್ಮಕವಾಗಿ ಗಂಟುಬಿದ್ದು ಮುಂದೆ ನೋವಾವಾಗಿ ಸ್ಫೋಟಿಸಿ ನಾಶವಾಗುತ್ತದೆ. ಕಾರ್ಬನ್ ತಾರೆಯ (ಮೂರನೆಯ ಹಂತ) ರಾಶಿ ಚಂದ್ರಶೇಖರ್ ಪರಿಮಿತಿಯನ್ನು ಮೀರಿರುವಾಗ ನಕ್ಷತ್ರವಿಕಾಸ ಮುಂದಿನ ಮಜಲುಗಳಲ್ಲಿ ನಡೆಯುತ್ತದೆ. ಸೂತ್ರರೂಪಸಲ್ಲಿ ಅವು:

ಕಾರ್ಬನ್ ಆಕ್ಸಿಜನ್‍ನೀಯಾನ್‍ಸಲ್ಫರ್‍ಸಿಲಿಕಾನ್‍ಕಬ್ಬಿಣ

	ಅಂದರೆ ಸ್ಫೋಟಪೂರ್ವ ಹಂತದಲ್ಲಿ ನಕ್ಷತ್ರದ ತೀರ ಹೊರಪದರ ಹೈಡ್ರೊಜನ್, ಇದರೊಳಗಿನದು ಹೀಲಿಯಮ್ ಪದರ - ಹೀಗೆಯೇ ಮುಂದುವರಿದು ತಿರುಳಿನಲ್ಲಿ ಕಬ್ಬಿಣ ಜಮೆ ಆಗಿರುತ್ತವೆ. ಕಬ್ಬಿಣದ ಅಣುಗಳು ರಚನೆಯಾದಾಗ ಮುಂದಿನ ಬೈಜಿಕ ಕ್ರಿಯೆಗಳು ನಡೆಯಲಾಗದೇ ನಿಂತುಹೋಗುತ್ತವೆ. ಆಗ ಗುರುತ್ವದ ಕಬ್ಬಿಣ ತಾರೆಯ ಕೇಂದ್ರದಿಂದ ಪರಿಧಿಯವರೆಗಿನ ಖಂಡಚಿತ್ರ. (ಈe) ಕಬ್ಬಿಣ, (Si) ಸಿಲಿಕನ್, (S) ಗಂಧಕ, (ಔ) ಆಕ್ಸಿಜನ್, (ಓe) ನೀಯಾನ್, (ಅ) ಕಾರ್ಬನ್, (ಊe) ಹೀಲಿಯಮ್, (ಊ) ಹೈಡ್ರೊಜನ್ ಕೇಂದ್ರಾಭಿಮುಖ ಸಂಮರ್ದವನ್ನು ಭರಿಸಲಾಗದೆ ನಕ್ಷತ್ರ ಗುರುತ್ವನಿಪತನಕ್ಕೆ ಈಡಾಗಿ ಸ್ಫೋಟಿಸುತ್ತದೆ.

ಚಿತ್ರ-1

 ಕೇವಲ ಸೆಕೆಂಡಿನ ಅಲ್ಪಾಂಶದಲ್ಲಿ ಈ ಕ್ರಿಯೆ ನಡೆದು ಹೋಗುತ್ತದೆ.  ಇದೇ ಸೂಪರ್ನೋವಾ. ಸ್ಫೋಟಾನಂತರ ತಿರುಳೇನಾದರೂ ಉಳಿದಿದ್ದರೆ ಅದು ನ್ಯೂಟ್ರಾನ್ ಕಣಗಳ ಅತಿಸಾಂದ್ರ ಅತಿತಪ್ತ ಮುದ್ದೆ. ಇದು ನ್ಯೂಟ್ರಾನ್ ನಕ್ಷತ್ರ. ಇದರಿಂದ ವಿಕಿರಣ ಸ್ಪಂದಗಳು ನಿಯತಕಾಲಿಕವಾಗಿ ಸಿಡಿಯುತ್ತವೆ ಎಂದೇ ಇವುಗಳಿಗೆ ಪಲ್ಸಾರುಗಳೆಂದು (ನೋಡಿ- ಪಲ್ಸಾರುಗಳು) ಹೆಸರು. 

	ಸ್ಫೋಟದಲ್ಲಿ ವಿಮೋಚಿತವಾಗುವ ಶಕ್ತಿ ಅಗಾಧ. 1053ಅರ್ಗ್/ಸೆ. ಅಂದರೆ ಯಾವುದೇ ಬ್ರಹ್ಮಾಂಡದ ಸಮಗ್ರ ಶಕ್ತಿಗೆ ಇದನ್ನು ಹೋಲಿಸಬಹುದು. ಆದ್ದರಿಂದ ದೂರ ಬ್ರಹ್ಮಾಂಡಗಳಲ್ಲಿ ಸೂಪರ್ನೋವಾ ಘಟಿಸಿದಾಗ, ಅದು ಆ ನಕ್ಷತ್ರಸಮುದಾಯದಲ್ಲೇ ಎದ್ದು ಪ್ರಕಟವಾಗುವುದು. ಸ್ಫೋಟದಲ್ಲಿ ಹೊರಬಿದ್ದ ವಸ್ತು ಸುತ್ತಲಿನ ಅಂತರನಾಕ್ಷತ್ರಿಕ ಮಾಧ್ಯಮದ ಅಣುಗಳನ್ನು ಪ್ರಚೋದಿಸಿ, ಅವೂ ಬೆಳಗುವಂತೆ ಮಾಡುವುದು. ನ್ಯೂಟ್ರಾನ್ ನಕ್ಷತ್ರ ಕಾಣದಿದ್ದರೂ ಅದರ ಸುತ್ತಲಿನ ವಸ್ತು ನೀಹಾರಿಕೆಯಂತೆ ಬೆಳಗುವುದು. ಸೂಪರ್ನೋವಾದ ವಿಶೇಷವಿದು. ವೃಷಭರಾಶಿಯಲ್ಲಿಯ ಕ್ರ್ಯಾಬ್ ನೀಹಾರಿಕೆ ಇದಕ್ಕೆ ಉತ್ತಮ ಉದಾಹರಣೆ. 1054ರಲ್ಲಿ ಸಿಡಿದ ಸೂಪರ್ನೋವಾವಶೇಷವಿದು. ಸಾವಿರಾರು ವರ್ಷಪರ್ಯಂತ ಈ ಅವಶೇಷಗಳು ರೇಡಿಯೊ ಮತ್ತು ಎಕ್ಸ್‍ಕಿರಣಗಳನ್ನು ಉತ್ಸರ್ಜಿಸುತ್ತವೆ.

	ಪಲ್ಸಾರ್ ಅಥವಾ ನ್ಯೂಟ್ರಾನ್ ತಾರೆಯೂ ಗುರುತ್ವನಿಪತನದ ಕಾರಣವಾಗಿ ಕುಗ್ಗುತ್ತದೆ. ಆಗ ಇದರ ವಿಮೋಚನ ವೇಗ (ಎಸ್ಕೇಪ್ ವೆಲಾಸಿಟಿ =, ಇಲ್ಲಿ ಉ ಗುರುತ್ವ ಸ್ಥಿರಾಂಕ, ಒ ಆ ತಾರೆಯ ರಾಶಿ, ಖ ಅದರ ತ್ರಿಜ್ಯ) ಅತಿಶಯವಾಗಿ ಏರುತ್ತದೆ. ಎಲ್ಲಿ ವರೆಗೆ ಎಂದರೆ ಸಾಕ್ಷಾತ್ ಬೆಳಕಿನ ವೇಗವನ್ನೂ (ಛಿ= ಸೆಕೆಂಡಿಗೆ ಸು. 300,000 ಕಿಮೀ) ಮೀರುತ್ತದೆ. ಅಲ್ಲಿಂದ ಮುಂದಕ್ಕೆ ನ್ಯೂಟ್ರಾನ್ ತಾರೆಯಿಂದ ಯಾವ ಮಾಹಿತಿಯೂ ಹೊರಹೊಮ್ಮದು. ಇದೊಂದು ವಿಚಿತ್ರ ಪರಿಸ್ಥಿತಿ - ಭೌತ ಅಸ್ತಿತ್ವವಿದ್ದರೂ ಮಾಹಿತಿ (ವಿಕಿರಣ) ಪ್ರಸಾರವಾಗದ ಊಹಾತೀತ ಹಂತ. ಈ ಕಾಲ್ಪನಿಕ ವೈಚಿತ್ರ್ಯವನ್ನು ಬ್ಲಾಕ್ ಹೋಲ್ (ಕೃಷ್ಣ ವಿವರ) ಎಂದು ಹೆಸರಿಸಿದೆ (1967). ಇಲ್ಲಿಯ ವೈಚಿತ್ರ್ಯವೆಂದರೆ ಕೃಷ್ಣವಿವರದ ಬಣ್ಣ ಕೃಷ್ಣ (ಬ್ಲ್ಯಾಕ್) ಅಲ್ಲ, ಅಲ್ಲೊಂದು ವಿವರವೂ (ಹೋಲ್) ಇಲ್ಲ! ಕೃಷ್ಣವಿವರದ ಭೌತ ಅಸ್ತಿತ್ವ 1999ರಲ್ಲಿ ಪರೋಕ್ಷ ವಿಧಾನಗಳಿಂದ ದೃಢೀಕೃತವಾಗಿದೆ. 

	ಭೂಮಿಯಂಥ ಅನಕ್ಷತ್ರಕಾಯದಲ್ಲಿ ಲಭಿಸುವ 92 ನೈಸರ್ಗಿಕ ರಾಸಾಯನಿಕ ಧಾತುಗಳ ನಿರ್ಮಾಣ ಹೇಗಾಯಿತು ಎಂಬ ಮೂಲಭೂತ ಪ್ರಶ್ನೆ ವಿಜ್ಞಾನಿಗಳನ್ನು ಬಲುಕಾಲದಿಂದ ಕಾಡುತ್ತಿತ್ತು. ಈ ಕಾರ್ಖಾನೆ ಭೂಮಿ ಅಲ್ಲ, ಸೂರ್ಯ ಅಲ್ಲ, ಯಾವುದೇ ನಕ್ಷತ್ರವೂ ಅಲ್ಲ ಎಂದು 1960ರ ವೇಳೆಗೆ ದೃಢವಾಗಿತ್ತು. ಸೂಪರ್ನೋವಾ ಕುರಿತ ಸಂಶೋಧನೆ-ವೀಕ್ಷಣೆ-ದೃಢೀಕರಣ-ಸಿದ್ಧಾಂತ ಮುನ್ನಡೆದಂತೆ 1990ರ ವೇಳೆಗೆ ಆ ಕಾರ್ಖಾನೆ ಬೇರಾವುದೂ ಅಲ್ಲ, ಖುದ್ದು ಸೂಪರ್ನೋವಾಸ್ಫೋಟನೆ ಎಂದು ಸಂದೇಹಾತೀತವಾಗಿ ಸಿದ್ಧವಾಯಿತು. ಆದ್ದರಿಂದ ನಮ್ಮ ದೇಹದ, ನಾವು ತಿನ್ನುವ ಆಹಾರ ಪದಾರ್ಥಗಳ, ತೊಡುವ ವಸ್ತ್ರದ ಖುದ್ದು ನಮ್ಮ ಪರಿಸರದ ಘಟಕಧಾತುಗಳು ವಿವಿಧ ಕಾಲಗಳಲ್ಲಿ ವಿಭಿನ್ನ ಪ್ರದೇಶಗಳಲ್ಲಿ ಸಂಭವಿಸಿದ ಸೂಪರ್ನೋವಾಸ್ಫೋಟನೆಗಳಿಂದ ಉದ್ಭವಿಸಿದ ಭಸ್ಮಗಳೆಂಬುದು ಸ್ಪಷ್ಟ. ಪ್ರಕೃತ ಗಣನೆಗಳಂತೆ ವಿಶ್ವದ ವಯಸ್ಸು ಸು. 15,000,000,000 (=15ಘಿ109) ವರ್ಷಗಳು; ಇದರಲ್ಲಿರುವ ಬ್ರಹ್ಮಾಂಡಗಳ ಸಂಖ್ಯೆ ಸುಮಾರು 100,000,000,000 (=1011), ಒಂದೊಂದು ಬ್ರಹ್ಮಾಂಡದಲ್ಲಿಯೂ ಇರುವ ನಕ್ಷತ್ರಗಳ ಸಂಖ್ಯೆ ಸು. 400,000,000,000 (=4ಘಿ1011) ವಿಶ್ವದ ಪರಿಧಿ ಇಂದಿಗೂ ಹಿಗ್ಗುತ್ತಲೇ ಇದೆ ಎಂಬುದು ಪ್ರಚಲಿತ ಸಿದ್ಧಾಂತ. ಅಂದ ಮೇಲೆ ದೇಶಕಾಲಗಳಲ್ಲಿ ಅಗಾಧವಾಗಿರುವ ವಿಶ್ವದಲ್ಲಿ ಸೂಪರ್ನೋವಾಸ್ಫೋಟನೆಗಳು ವಿರಳ ಘಟನೆಗಳಾಗಬೇಕಾಗಿಲ್ಲ, ನಮ್ಮ ಅರಿವಿಗೆ ಅವು ಬರುವುದು ಮಾತ್ರ ವಿರಳ. ಇದಾದರೂ ನಮ್ಮ ಸೀಮಿತ ವಿಜ್ಞಾನ ಮತ್ತು ತಂತ್ರವಿದ್ಯೆಯ ಮಿತಿಗೆ ಹಿಡಿದ ಕನ್ನಡಿ.

	ಇತಿಹಾಸದ ದಫ್ತರಗಳನ್ನು ಸಂಶೋಧಕರು ಜಾಲಾಡಿ ಗತವರ್ಷಗಳಲ್ಲಿ ಗೋಚರಿಸಿದ 7 ಸೂಪರ್ನೋವಾಗಳ ಬಗ್ಗೆ ವಿವರಗಳನ್ನು ದಾಖಲಿಸಿದ್ದಾರೆ. ಇವು ಐತಿಹಾಸಿಕ ಸೂಪರ್ನೋವಾಗಳು.

ಸೂಪರ್ನೋವಾ	ಹಿನ್ನೆಲೆಯ	ಉಜ್ವ್ವಲತಾಂಕ	ಗೋಚರಾವಧಿ	ದಾಖಲೆಯ
ಘಟಿಸಿದ ಇಸವಿ	ನಕ್ಷತ್ರ 			  ಆಕರ
 ಕ್ರಿಶ	ಪುಂಜ
185	ಕಿನ್ನರ	-8	20 ತಿಂಗಳು	ಚೀನ
393	ವೃಶ್ಚಿಕ	-1	 8 ತಿಂಗಳು	ಚೀನ
  1006	ವೃಕ	-8ರಿಂದ10	ಹಲವು ವರ್ಷ	ಚೀನ, 					ಜಪಾನ್,					ಯುರೋಪ್					ಅರೇಬಿಯ
1054	ವೃಷಭ	-5	22 ತಿಂಗಳು	ಚೀನ,					ಜಪಾನ್
1181	ಕುಂತೀ	 0	 6 ತಿಂಗಳು	ಚೀನ,					ಜಪಾನ್
1572	ಕುಂತೀ	-4	18 ತಿಂಗಳು	ಚೀನ,					 ಕೊರಿಯ   
                                                      ಯುರೋಪ್
1604	ಉರಗಧರ	-2.5	12 ತಿಂಗಳು	ಚೀನ, 					ಕೊರಿಯ   
                                                      ಯುರೋಪ್

ಕೃಷ್ಣವಿವರ ಹಂತದಿಂದ ಮುಂದೇನು ಎಂಬುದು ಈಗ (2005) ಮುಂಚೂಣಿ ಖಭೌತವಿಜ್ಞಾನಿಗಳ ಎದುರಿರುವ ಪ್ರಶ್ನೆ.	
										(ಎಸ್.ಎಚ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ